Sunday, March 2, 2008

ನಾ ಒಂಟಿಯಾಗಿದ್ದರೆ
ಮುಂದೊಮ್ಮೆ ನೀ ಬಂದು
ನನ್ನ ಜೊತೆಯಾಗಲು ನಾ ಕವಿತೆಯಾಗಿ
ಅರಳಬಹುದೆಂದು ಕಾಯಬಹುದಿತ್ತು.
ಆದರೆ ನನ್ನೊಡನೆ ನೀನಿದ್ದೂ
ಇಲ್ಲದಂತಿರಲು, ನನ್ನೊಲವು
ಭಾವವಿದ್ದೂ ಶಬ್ದಗಳೇ ಸಿಗದೇ
ಮನದಲ್ಲೇ ಮರೆತುಹೋದ ಕವಿತೆಯಾಗಿತ್ತು.

ನೀ ಮೌನವಾಗಿದ್ದಿದ್ದರೆ
ಮುಂದೊಮ್ಮೆ ನಿನ್ನ ಮೌನ ಬಿರಿದು
ಮಾತು ಹೊರ ಬರಲು ನಿನ್ನ ದನಿಗೆ
ನಾ ದನಿಯಾಗಬಹುದೆಂದು ಕಾಯಬಹುದಿತ್ತು.
ಆದರೆ ನಿನ್ನ ಮಾತುಗಳೇ ಒಗಟು ಒಗಟಾಗಿ
ಅರ್ಥವಾಗದಾದಾಗ ನನ್ನ ಸ್ಥಿತಿ
ಹರಿವ ನೀರಲ್ಲಿಯೇ ಹುಟ್ಟು ಹಾಕಿ
ದೋಣಿ ನಡೆಸಲಾರದವ,
ಹೆಪ್ಪುಗಟ್ಟಿದನೀರ ಮುಂದೆ ನಿಂತ ಹಾಗಿತ್ತು .

ಕಟ್ಟಿದ್ದು ಕಾರ್ಮೋಡವಾಗಿದ್ದರೆ
ಮುಂದೊಮ್ಮೆ ಅದು ಕರಗಿ ನೀರಾಗಿ
ಸುರಿದು ಹೋಗಬಹುದೆಂದು ನಾ ಕಾಯಬಹುದಿತ್ತು.
ಆದರೆ ತಿಳಿನೀಲಿ ನಿಶ್ಚಲ ಬಾನೇ ನನ್ನ ಕಣ್ಣಿಗೆ ಅಡ್ಡಗಟ್ಟಿ
ನಮ್ಮಿಬ್ಬರ ಮನದ ನಡುವಿನ ಅಂತರವನ್ನು
ಅಳೆದಳೆದು ಸಾರಿ ಹೇಳುವಾಗ
ನಾನಾದರೂ ಏನು ಮಾಡಲು ಸಾಧ್ಯವಿತ್ತು ?